ಡೆರಿಕ್
	ಭಾರದ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಅಥವಾ ಮೇಲಕ್ಕೆತ್ತುವ ಸಾಧನ. ಭ್ರಮಣ ಮತ್ತು ಸ್ಥಿರಪೀಠಗಳ ಡೆರಿಕ್ ಎಂಬ ಎರಡು ವಿಧಗಳುಂಟು. ಭ್ರಮಣ ವರ್ಗದಲ್ಲಿ ಹಗ್ಗದ ಡೆರಿಕ್ (ಗೈ ಡೆರಿಕ್) ಮತ್ತು ಪೆಡಸುಕಾಲಿನ ಡೆರಿಕ್ (ಸ್ಟಿಫ್ ಲೆಗ್ ಡೆರಿಕ್) ಎಂಬ ಎರಡು ಬಗೆಯವಿವೆ.

	ಹಗ್ಗದ ಡೆರಿಕ್: ಇದರ ಮಧ್ಯಭಾಗ ಕೂವೆ (ಮಾಸ್ಟ್). ಇದು ಮಾಲದಂತೆ ಮೂರು ಇಲ್ಲವೆ ಇನ್ನೂ ಹೆಚ್ಚಿನ ಹಗ್ಗಗಳಿಂದ ಬಂಧಿಸಲಾಗಿರುತ್ತದೆ. ಕೂವೆಯ ಬುಡದಿಂದ ಒಂದು ಚಾಚುತೋಳು (ಬೂಮ್) ಹೊರಡುತ್ತದೆ. ಇದರ ಭಾಗವನ್ನು (ಇನ್‍ಕ್ಲಿನೇಶನ್) ಹೆಚ್ಚು ಕಡಿಮೆ ಮಾಡಿ ಕೂವೆಯನ್ನು ಕೆಳಕ್ಕೂ ಮೇಲಕ್ಕೂ ಮಾಡಬಹುದು. ಇದರ ಸಲುವಾಗಿಯೇ ಒಂದು ತಂತಿ ಹಗ್ಗದ ವ್ಯವಸ್ಥೆ ಉಂಟು. ಇದಕ್ಕೆ ತೋಳಿನ ರೇಖೆ (ಬೂಮ್ ಲೈನ್) ಎಂದು ಹೆಸರು. ಭಾರವನ್ನು ಎತ್ತುವುದು ಇನ್ನೊಂದು ಹಗ್ಗ. ಇದು ಎತ್ತುಗೆ ರೇಖೆ. ಇದು ಕೊಕ್ಕೆಯ ಭಾಗದಿಂದ ಅನೇಕ ರಾಟೆಗಳ ಮೂಲಕ ಹಾದುಹೋಗುತ್ತದೆ. ಕೂವೆಯನ್ನು ಒಂದು ಸುತ್ತು ಪೂರ್ತ (360o) ತಿರುಗಿಸಬಹುದು.

	ಅನೇಕ ಅಂತಸ್ತುಗಳಿರುವ ಕಟ್ಟಡಗಳಲ್ಲಿ ಭಾರಿ ಉಕ್ಕಿನ ಚೌಕಟ್ಟುಗಳನ್ನು ಎತ್ತಿ ಸರಿಯಾದ ಸ್ಥಳಗಳಲ್ಲಿರಿಸಲು ಇಂಥ ಹಗ್ಗದ ಡೆರಿಕ್‍ನ ಉಪಯೋಗ ಇದೆ.

	ಪೆಡಸುಕಾಲಿನ ಡೆರಿಕ್: ಇದು ಕೂಡ ಹಗ್ಗದ ಡೆರಿಕ್‍ನಂಥದ್ದೇ ರಚನೆ ಹೊಂದಿದೆ. ಕೊವೆಯ ಇಬ್ಬದಿಯಲ್ಲೂ ತ್ರಿಕೋನಾಕೃತಿಯ ಚೌಕಟ್ಟುಗಳಿವೆ. ಇವು ಕೊವೆಗೆ 90o ಕೋನದಲ್ಲಿರುವಂತೆ ಅಳವಟ್ಟಿರುತ್ತವೆ. ಕೊವೆಗೆ ಸುಮಾರು 240o ಮುಕ್ತ ತಿರುಗಾಟ ಉಂಟು. ಕೈಯಿಂದಾಗಲಿ ಯಂತ್ರದ ಸಹಾಯದಿಂದಾಗಲಿ ಇದನ್ನು ತಿರುಗಿಸಬಹುದು.

	ಮೇಲೆ ಹೇಳಿದ ಎರಡು ರೀತಿಯ ಡೆರಿಕ್‍ಗಳನ್ನು ಮರ ಅಥವಾ ಉಕ್ಕಿನಿಂದ ತಯಾರಿಸಬಹುದು. ರಚನೆ ಸರಳವಾಗಿದ್ದು, ಭಾಗಗಳನ್ನು ಸುಲಭವಾಗಿ ಕಳಚಿ ಬಿಡಬಹುದು.

	ಸ್ಥಿರಪೀಠದ ಡೆರಿಕ್: ಜಲ, ಅನಿಲ, ತೈಲಗಳಿಗಾಗಿ ಆಳಬಾವಿ ತೋಡುವ ಕಡೆ ಇದರ ಉಪಯೋಗ. ಪಿರಮಿಡ್ ಆಕಾರದ ಗೋಪುರ ಇದು. ನಾಲ್ಕು ಕಾಲುಗಳ ಮೇಲೆ ನಿಂತಿರುತ್ತದೆ. ಬಾವಿ ತೋಡುವ ಹತ್ಯಾರುಗಳಿಗೆ ಇದು ಆಧಾರ. ರಾಟೆಗಳ ಮೂಲಕ ಹಾದುಹೋಗುವ ಹಗ್ಗಗಳಿಂದ ಎತ್ತುಗೆಯ ಕೆಲಸ ನಡೆಯುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇದನ್ನು ಸಾಗಿಸಬಹುದು. ಬೇರೆ ಬೇರೆ ತಲಗಳಲ್ಲಿ ಭಾಗಗಳಿರುವ ತ್ರಿಆಯಾಮಕ ಚೌಕಟ್ಟಿನ ರಚನೆಯನ್ನೂ ಡೆರಿಕ್ ಎಂದೇ ಕರೆಯುವುದಿದೆ. ಈ ಗುಂಪಿಗೆ ಸೇರುವ ಇತರ ರಚನೆಗಳು ಕ್ರೇನ್ ಮುಂತಾದವು.
                                                                            (ಕೆ.ಆರ್.ಎಂ.ಒ.)
(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ